ಕಾಮಿಡಿ ಆಫ್ ಮ್ಯಾಂಟಲ್ ಅಂಡ್ ಸ್ವೋರ್ಡ್

ಅಭಿಜಾತ ಮಾರ್ಗವನ್ನನುಸರಿಸಿ ಬರೆದ ಸ್ಪೇನ್ ದೇಶದ ಒಂದು ಬಗೆಯ ವಿನೋದನಾಟಕ ಇಂಥ ನಾಟಕಗಳನ್ನು ಹೆಚ್ಚಾಗಿ ಬರೆದ ಕೀರ್ತಿ ಸ್ಪೇನಿನ ಲೋಪೇ ದೇ ವೇಗ (1510 ? -1565) ಎಂಬುವನಿಗೆ ಸೇರಿದ್ದು. ರಸಿಕರಾದ ಸೈನಿಕರು, ದುರ್ಬಲಾನುಕಂಪೆಯುಳ್ಳ ರಾಹುತರು, ಮುಂತಾದವರು ನಾಟಕದಲ್ಲಿ ಬರುವ ಪ್ರಮುಖ ಪಾತ್ರಗಳು. ಪಾತ್ರಗಳು ಸಡಿಲವಾದ ಪೋಷಾಕನ್ನು ಧರಿಸಿ ಕತ್ತಿಹಿಡಿದು ಬರುತ್ತಿದ್ದುದರಿಂದ ಈ ಬಗೆಯ ವಿನೋದನಾಟಕಗಳಿಗೆ ಈ ಹೆಸರು ಬಂತು. ಈ ಸೊಗಸುಗಾರರು ಶ್ರೀಮಂತ ಸ್ತ್ರೀಯರನ್ನು ಪ್ರೀತಿಸಿ ಅವರಿಗೋಸ್ಕರ ಅಥವಾ ತಮ್ಮ ಆತ್ಮಗೌರವಕ್ಕೋಸ್ಕರ ಕಾದಾಡಲು ತವಕಿಸುತ್ತಾರೆ. ಅನೇಕ ವೇಳೆ ತಮ್ಮ ಹೆಂಡಿರನ್ನು ಕೊಂದು ತಮ್ಮ ಪ್ರೇಮವನ್ನು ಪ್ರದರ್ಶಿಸುವುದಕ್ಕೂ ಸಿದ್ದ. ಮುಖ್ಯ ಪಾತ್ರಗಳ ಒಂದು ರೀತಿಯ ವೀರತ್ವ ಸ್ತ್ರೀಲೋಲುಪತೆ, ಸ್ತ್ರೀಯ ಗೌರವಕ್ಕಾಗಿ ಕಾದಾಡುವುದು; ಸೇವಕರು ಮತ್ತಿತ್ತರ ಗೌಣ ಪಾತ್ರಗಳ ಮಾತಿನ ಚಮತ್ಕಾರ, ಚಾಲೋಕಿನ ಹೆಂಗಸರು ಗಂಡಸರನ್ನು ಮೋಜಿನ ಪ್ರಸಂಗಗಳಲ್ಲಿ ಸಿಕ್ಕಿಬೀಳುವಂತೆ ಮಾಡುವುದು-ಇವು ಈ ವಿನೋದನಾಟಕಗಳಲ್ಲಿ ಆಗಾಗ ಬರುವ ಘಟನೆಗಳು. ಇಂಥ ಘಟನೆಗಳನ್ನು ಪಾತ್ರಗಳನ್ನೂ ನಾವು ಸವ್ರ್ಯಾಂಟೀಸನ ಡಾನ್ ಕ್ವಿಕ್ಸಟ್ ಕಾದಂಬರಿಯಲ್ಲೂ ಕಾಣುತ್ತೇವೆ.

 

(ಎಚ್.ಕೆ.ಆರ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ